ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಅವರ ಜಾಮೀನು ಸುಪ್ರೀಂ ಕೋರ್ಟ್ ಆದೇಶದಂತೆ ರದ್ದುಗೊಂಡಿದ್ದು, ಇಂದು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಸಮಯದಲ್ಲಿ ಪವಿತ್ರಾ ಗೌಡ ಅವರು ಪೊಲೀಸರಿಗೆ ಆಕ್ರೋಶ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.

ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಆದೇಶ ನೀಡಿತ್ತು. ಇದರಂತೆ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮೆಮೊ ಸಹಿತವಾಗಿ ಪವಿತ್ರಾ ಗೌಡ ಅವರ ಮನೆಯಲ್ಲಿ ಹಾಜರಾಗಿ ಬಂಧಿಸಿದರು.

ಬಂಧನದ ಸಮಯದಲ್ಲಿ ಪವಿತ್ರಾ ಗೌಡ ಆರಂಭದಲ್ಲಿ ಮೌನವಾಗಿ ಕುಳಿತಿದ್ದರು. ಅವರ ಪರ ವಕೀಲರಾದ ಬಾಲನ್ ಮತ್ತು ನಾರಾಯಣಸ್ವಾಮಿ ಪೊಲೀಸರು ಅವರನ್ನು ಕೋರ್ಟ್‌ಗೆ ನೇರವಾಗಿ ಹಾಜರುಪಡಿಸಲು ವಿನಂತಿಸಿದರೂ, ಅಧಿಕಾರಿಗಳು “ಅರೆಸ್ಟ್ ಮಾಡಲೇಬೇಕು” ಎಂಬ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅವರನ್ನು ಠಾಣೆಗೆ ಕರೆದುಕೊಂಡು ಹೋದರು.

ಈ ವೇಳೆ ಪವಿತ್ರಾ ಗೌಡ ಅವರನ್ನು ಕರೆದೊಯ್ಯುವಾಗ ಅವರೊಂದಿಗೆ ಇದ್ದ ವಕೀಲ ಎಡವಿದ ಘಟನೆ ನಡೆದಿದೆ. ಇದರಿಂದ ಕೋಪಗೊಂಡ ಪವಿತ್ರಾ, “ಯಾಕೆ ತಳ್ಳುತ್ತೀರಿ? ಮೊದಲು ಮೊಬೈಲ್ ಬಿಡಿ. ಸರಿಯಾಗಿ ಕರೆದುಕೊಂಡು ಹೋಗಿ” ಎಂದು ಪೊಲೀಸರಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮಹಿಳಾ ಸಿಬ್ಬಂದಿಗಳ ಮೇಲೂ ಆಕ್ರೋಶ ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

ಬಂಧನದ ಕ್ಷಣದಲ್ಲಿ ವಕೀಲರು ಪವಿತ್ರಾ ಗೌಡ ಅವರಿಗೆ ಬೆಂಬಲದ ಭರವಸೆ ನೀಡಿದ್ದು, “ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ” ಎಂದು ಧೈರ್ಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಅವರ ಕಣ್ಣಲ್ಲಿ ಕಣ್ಣೀರು ತುಂಬಿಕೊಂಡಿತ್ತು.

error: Content is protected !!