ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ನಿನ್ನೆ ದೊಡ್ಡ ಆಘಾತವಾಯಿತು. ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾಗಿದ್ದ ಅವರ ಸ್ಮಾರಕವನ್ನು ತೆರವುಗೊಳಿಸಲಾಗಿತ್ತು. ಈ ಬೆಳವಣಿಗೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ನಟ ಕಿಚ್ಚ ಸುದೀಪ್ ಭಾವೋದ್ರಿಕ್ತವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವನೆ ಹಂಚಿಕೊಂಡ ಸುದೀಪ್, “ವಿಷ್ಣುವರ್ಧನ್ ಎಂದರೆ ಅದು ಎಂದಿಗೂ ಮುಗಿಯದ ಅಭಿಮಾನ ಮತ್ತು ಗೌರವ. ಅವರ ಸ್ಮಾರಕವನ್ನು ಒಡೆದು ಹಾಕಿರುವುದು, ನಮ್ಮ ನಂಬಿಕೆಯ ದೇವಾಲಯವನ್ನು ಧ್ವಂಸ ಮಾಡಿದಂತೆ ನೋವುಂಟುಮಾಡಿದೆ. ಇದು ಹೈಕೋರ್ಟ್ ಆದೇಶ ಅಂತಾರೆ, ಆದರೆ ಸರ್ಕಾರದ ಮೂಲಕ ಸ್ಮಾರಕ ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಮಂತ್ರಿಗಳಿಗೆ ಮನವಿ ಮಾಡಿದ್ದೆ, ಹಣಕಾಸು ಬೇಕಾದರೂ ಕೊಡಲು ಸಿದ್ಧ ಅಂತ ನಾನೇ ಹೇಳಿದ್ದೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಅನ್ನಿಸುವಂತೆ ಇದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ಮುಂದುವರಿದು, “ಮೈಸೂರಿನಲ್ಲಿ ಈಗಾಗಲೇ ಅಧಿಕೃತ ಸ್ಮಾರಕವಿದೆ ಎಂದು ಕೋರ್ಟ್ ಹೇಳಿದೆ. ಕೋರ್ಟ್ ವಿರುದ್ಧವಾಗಿ ಮಾತನಾಡಲು ಆಗುವುದಿಲ್ಲ. ಆದರೆ, ಭೂಮಿ ಖರೀದಿಸಿದವರ ಮನ ಒಲಿಸಿ, ಕನಿಷ್ಠ ಆ ಜಾಗದ ಒಂದು ಭಾಗವನ್ನು ಉಳಿಸಲು ನಾನು ಸಿದ್ಧನಿದ್ದೇನೆ. ಸರ್ಕಾರ ಮಧ್ಯಪ್ರವೇಶಿಸಿದರೆ ಸಮಸ್ಯೆ ಬಗೆಹರಿಯುತ್ತದೆ” ಎಂದರು.
ವಿಷ್ಣುವರ್ಧನ್ ಅವರ ಆಧ್ಯಾತ್ಮ ಪ್ರೀತಿಯನ್ನು ನೆನೆದು ಸುದೀಪ್ ಹೇಳಿದರು, “ಅವರು ರೂಪಕವಾಗಬೇಕು, ಪಂಚಭೂತಗಳಲ್ಲಿ ಇರಬೇಕು ಅಂತ ಹೇಳುತ್ತಿದ್ದರು. ಆದರೆ ಅಭಿಮಾನಿಗಳಿಗೆ ಪೂಜೆ ಮಾಡಲು, ಜನ್ಮದಿನ ಆಚರಿಸಲು, ಗೌರವ ಸಲ್ಲಿಸಲು ಒಂದು ಸ್ಥಳ ಅಗತ್ಯ. ಬೆಂಗಳೂರಿನಂತಹ ನಗರದಲ್ಲಿ ಅರ್ಧ ಎಕರೆ ಜಾಗ ಕೊಡಲಿಲ್ಲ ಅಂದರೆ, ಇದು ಖಂಡನೀಯ. ಬಾಲಕೃಷ್ಣ ಅವರ ಸಮಾಧಿಯನ್ನೂ ತೆರವುಗೊಳಿಸಲಾಗಿದೆ ಎಂದು ಕೇಳಿದ್ದೇನೆ. ಇವೆಲ್ಲ ಭಾವನೆಗಿಂತ ಭೂಮಿ ವ್ಯವಹಾರ ದೊಡ್ಡದಾಗಿದೆ ಎನ್ನಿಸುವಂತಿದೆ” ಎಂದು ವ್ಯಥೆ ವ್ಯಕ್ತಪಡಿಸಿದರು.
“ನ್ಯಾಯಾಲಯಕ್ಕೆ ಹೋಗಬೇಕಾದರೆ, ನಾನೂ ಸಿದ್ಧ. ಭೂಮಿ ಮಾಲೀಕರು, ಸರ್ಕಾರ, ನ್ಯಾಯಾಲಯ – ಎಲ್ಲರಿಗೂ ನನ್ನ ಮನವಿ, ಬೇಕಾದ ಹಣವನ್ನು ನಾವು ಲಕ್ಷಾಂತರ ಅಭಿಮಾನಿಗಳು ಸೇರಿ ಕೊಡಲು ಸಿದ್ಧರಿದ್ದೇವೆ. ನಾನೇ ಮುಂದೆ ನಿಂತು ಸ್ಮಾರಕ ಮರುಸ್ಥಾಪನೆ ಮಾಡುತ್ತೇನೆ. ವಿಷ್ಣು ಸರ್ ಸದಾ ನಮ್ಮ ಹೃದಯಗಳಲ್ಲಿ ಇರುತ್ತಾರೆ. ಆದರೆ ಪ್ರಾರ್ಥನೆ, ಗೌರವಕ್ಕೆ ಒಂದು ಸಂಕೇತ ಸ್ಥಳ ಬೇಕು. ಆ ಪ್ರೀತಿಗೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ” ಎಂದು ಸುದೀಪ್ ತಮ್ಮ ಪೋಸ್ಟ್‌ನಲ್ಲಿ ವಿನಂತಿಸಿದರು.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
