ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪುನೀತ್ ಕೆರೆಹಳ್ಳಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ. ಮೂವರ ಮೇಲೂ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ.

ಬೆಳ್ತಂಗಡಿ ನಿವಾಸಿ ಚರಣ್ ಶೆಟ್ಟಿ ನೀಡಿದ ದೂರು ಪ್ರಕಾರ, ಧರ್ಮಸ್ಥಳದಲ್ಲಿ ನಡೆದ ಗಲಭೆಯಲ್ಲಿ ಗಿರೀಶ್ ಮಟ್ಟಣನವರ್ ತಮ್ಮ ಭಾಷಣದಲ್ಲಿ ಅಪರಾಧಿಕ ಕೃತ್ಯಗಳಿಗೆ ಪ್ರೇರೇಪಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ. ಇದೇ ದೂರುದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ, ಬೆಳ್ತಂಗಡಿ ಗ್ರಾಮದ ಜೆರೋಮ್ ಬರ್ಬೋಝಾ ಎಂಬುವರು ಪುನೀತ್ ಕೆರೆಹಳ್ಳಿ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಅಶ್ಲೀಲ ಮತ್ತು ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪ ಇದಾಗಿದೆ.

ಇದಲ್ಲದೆ, ಖಾಸಗಿ ವಾಹಿನಿಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಮತ್ತೊಂದು ಪ್ರಕರಣದಲ್ಲೂ ಗಿರೀಶ್ ಮಟ್ಟಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ಹಾಗೂ ಜಯಂತ್ ಸೇರಿ ಹಲವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂಗಳು BNS 115(2), 189(2), 191(2), 351(2), 352 ಮತ್ತು 190 ಅಡಿಯಲ್ಲಿ ಆರೋಪಿಗಳನ್ನು ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಗಿರೀಶ್ ಮಟ್ಟಣನವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್ (ಎ3), ಜಯಂತ್ (ಎ4) ಮತ್ತು ಇತರರ ಹೆಸರುಗಳಿವೆ.

ಪ್ರಕರಣ ಈಗ ಪೊಲೀಸ್ ತನಿಖೆಯ ಹಂತಕ್ಕೆ ಪ್ರವೇಶಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗುವ ಸಾಧ್ಯತೆಯಿದೆ.

Related News

error: Content is protected !!