ಬೆಂಗಳೂರು, ಆ.7: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎಸ್‌ಐಟಿ ತಂಡ ಈಗಾಗಲೇ ಉತ್ಖನನ ಕಾರ್ಯ ಆರಂಭಿಸಿದ್ದು, ಈ ಮಧ್ಯೆ ಪರಿಸ್ಥಿತಿ ಮತ್ತಷ್ಟು ಚಿಗುರುವ ಲಕ್ಷಣಗಳು ಕಂಡುಬರುತ್ತಿವೆ. ನಿನ್ನೆ ನಡೆದ ಒಂದು ಗಂಭೀರ ಘಟನೆಯಲ್ಲಿ, ಧರ್ಮಸ್ಥಳದ ಸ್ಥಳೀಯರು ಕೆಲ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆ ಉಂಟಾಗಿದೆ ಎಂದು ಮೂಲಗಳು ತಿಳಿಸುತ್ತಿವೆ.

ಈ ಘಟನೆಯ ವೇಳೆ ಬಿಗ್ ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ ರಜತ್ ಕಿಶನ್ ಕೂಡ ಸ್ಥಳದಲ್ಲಿದ್ದರು. ಅವರ ಸಮ್ಮುಖದಲ್ಲಿಯೇ ಈ ಹಲ್ಲೆ ನಡೆದಿದ್ದು, ಬಳಿಕ ರಜತ್ ಸುದ್ದಿಗೋಷ್ಠಿಯಲ್ಲಿ ಶಾಕ್ ನೀಡುವ ಹೇಳಿಕೆ ನೀಡಿದ್ದಾರೆ. “ನನಗೆ ಕೊಲೆ ಬೆದರಿಕೆ ಬಂದಿದೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಪೋಲೀಸ್ ಆಯುಕ್ತರಿಗೆ ಈ ಕುರಿತು ದೂರು ನೀಡಲಿದ್ದೇನೆ ಎಂದ ರಜತ್, “ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಬೇಕು. ಅವರಂಥವರಿಗೆ ಬುದ್ಧಿ ಕಲಿಸಲೇಬೇಕು,” ಎಂದು ವಾಗ್ದಾಳಿ ನಡೆಸಿದರು.

ಘಟನೆ ಸಂಬಂಧ ವಿವರ ನೀಡಿದ ರಜತ್, “ನಾನು ಗಿರೀಶ್ ಮತ್ತು ಮಹೇಶ್ ಸರ್‌ರೊಂದಿಗೆ ಮಾತನಾಡಿದ ನಂತರ ಸೌಜನ್ಯ ಅವರ ಮನೆಯಲ್ಲಿ ಅವರ ತಾಯಿಯೊಂದಿಗೆ ಮಾತುಕತೆ ನಡೆಸಿದ್ದೆ. ಈ ವಿಷಯವನ್ನು ತಿಳಿದವರು, ‘ನಿನ್ನನ್ನೇ ಕೊಲೆ ಮಾಡ್ತೀನಿ’ ಎಂದು ಬೆದರಿಕೆ ಹಾಕಿದ್ದಾರೆ. ಇದು ಹೇಗಾದ ನ್ಯಾಯ? ಕೊಲೆ ಮಾಡಿದವರನ್ನು ಬೆಂಬಲಿಸೋದು ಏನು ಸಮಾಜಕ್ಕೆ ತೋರುವ ಮುಖ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮುಂದುವರೆದು, “ಇದೇ ಘಟನೆ ಅವರ ಮನೆಯ ಅಕ್ಕತಂಗಿಯರಿಗೆ ಆಗಿದ್ದರೆ, ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರು? ನಮ್ಮ ಸಮಾಜದಲ್ಲಿ ಧ್ವನಿ ಎತ್ತುವವರೇ ಇಲ್ಲದೆ ಹೋಗಿದ್ದಾರೆ. ಇದು ಸುಮ್ಮನೆ ನೋಡುವ ವಿಷಯವಲ್ಲ,” ಎಂದಿದ್ದಾರೆ.

ಈ ವಿವಾದದ ಹಿನ್ನಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಪೊಲೀಸರ ಮೇಲೂ ಹೆಚ್ಚಿನ ಹೊಣೆಗಾರಿಕೆ ಬಿದ್ದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

Related News

error: Content is protected !!