ಚಿಕ್ಕಬಳ್ಳಾಪುರ, ಆ.7 – ಜಿಲ್ಲಾ ಪಂಚಾಯ್ತಿ ಕಚೇರಿಯ ಆವರಣದಲ್ಲಿ ಖಾಸಗಿ ಕಾರು ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.
ಬಾಪೂಜಿನಗರದ ನಿವಾಸಿ ಬಾಬು (33) ಆತ್ಮಹತ್ಯೆಗೆ ಶರಣಾದ ಚಾಲಕ. ಕಳೆದ ಎಂಟು ವರ್ಷಗಳಿಂದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯ ಖಾಸಗಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಚಿಕ್ಕಬಳ್ಳಾಪುರದಲ್ಲೇ ಮನೆಯೊಂದನ್ನು ಹೊಂದಿದ್ದು, ಪತ್ನಿಯೊಂದಿಗೆ ನೆಲೆಸಿದ್ದರು.
ಮಂಗಳವಾರ ರಾತ್ರಿ ಮನೆಯಿಂದ ಹೊರಟಿದ್ದ ಬಾಬು, ಜಿಲ್ಲಾಪಂಚಾಯತ್ ಕಚೇರಿ ಆವರಣದಲ್ಲಿ ಇರುವ ಹೊಂಗೆಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಬು ವಾಪಸ್ ಮನೆಗೆ ಬಾರದ ಕಾರಣ ಅವರ ಕುಟುಂಬದವರು ಆತಂಕಗೊಂಡಿದ್ದರು.
ಇಂದು ಬೆಳಗ್ಗೆ ಕಚೇರಿಗೆ ಕೆಲಸಕ್ಕಾಗಿ ಬಂದ ಸಿಬ್ಬಂದಿ ಮರಕ್ಕೆ ಶವ ನೇಣಿಗೆ ಕಟ್ಟಿರುವುದು ಕಂಡು ತಕ್ಷಣವೇ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಾರದಿದ್ದರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದೆ.
