ತಿರುವನಂತಪುರಂ, ಜುಲೈ 29: ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ತೀವ್ರ ಗಂಭೀರತೆಯನ್ನು ಪಡೆದುಕೊಂಡಿವೆ. ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಮತ್ತೊಂದು ಘಟನೆ ಇದಕ್ಕೆ ತಾಜಾ ಉದಾಹರಣೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಪಕ್ಕದಲ್ಲಿದ್ದ ವೃದ್ಧ ವ್ಯಕ್ತಿ ಕಿರುಕುಳ ನೀಡಿದ್ದು,  ಯುವತಿ ತಕ್ಷಣವೇ ಪ್ರತಿಕ್ರಿಯಿಸಿ ಆತನಿಗೆ ಬಸ್‌ನಲ್ಲೇ ತರಾಟೆ ನೀಡಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪ್ರಕರಣದ ವಿವರಗಳನ್ನು ನೋಡಿದರೆ, ಯುವತಿ ತನ್ನ ಸ್ನೇಹಿತೆಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪಕ್ಕದ ಸೀಟಿನಲ್ಲಿ ವೃದ್ಧ ವ್ಯಕ್ತಿಯೊಬ್ಬನು ಕುಳಿತುಕೊಂಡಿದ್ದ. ಕೆಲ ಹೊತ್ತಿನ ನಂತರ ಆತನು ನಿಧಾನವಾಗಿ ತನ್ನ ಕೈಯನ್ನು ಯುವತಿಯ ಎದೆ ಹತ್ತಿರ ತಂದು ಇಡಲು ಯತ್ನಿಸಿದ್ದ. ಆರಂಭದಲ್ಲಿ ಯುವತಿ ಈ ವರ್ತನೆಯನ್ನು ನಿರ್ಲಕ್ಷಿಸಿದರೂ, ಅವನು ಉದ್ದೇಶಪೂರ್ವಕವಾಗಿ ಈ ಕೃತ್ಯ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾದ ನಂತರ, ಆಕೆ ತಕ್ಷಣವೇ ತನ್ನ ಸ್ನೇಹಿತೆಗೆ ಈ ಬಗ್ಗೆ ತಿಳಿಸಿದ್ದಾಳೆ.

ಸ್ನೇಹಿತೆ ಮೊಬೈಲ್‌ನಲ್ಲಿ ಆ ದೃಶ್ಯವನ್ನು ರೆಕಾರ್ಡ್ ಮಾಡುವ ಮೂಲಕ ಸಾಬೀತು ಸಂಗ್ರಹಿಸಿದ್ದಾರೆ. ನಂತರ ಆಕ್ರೋಶದಿಂದ ಎದ್ದು ನಿಂತ ಯುವತಿ ವೃದ್ಧ ವ್ಯಕ್ತಿಗೆ ಬಸ್‌ನಲ್ಲೇ ದಿಟ್ಟವಾಗಿ ಪ್ರಶ್ನಿಸಿ, “ನಿಮ್ಮ ಮನೆಯಲ್ಲೇನು ಹೆಣ್ಣುಮಕ್ಕಳು ಇಲ್ಲವೇ?” ಎಂದು ಕಿಡಿಕಾರಿದ್ದಾರೆ. ಅಲ್ಲಿಯವರೆದುರು ಅವನಿಗೆ ಕಪಾಳಮೋಕ್ಷ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿಯ ಧೈರ್ಯಮಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆಯು ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಮತ್ತೆ ಚರ್ಚೆಗೆ ಗ್ರಾಸವಾಗುತ್ತಿದೆ. ಪೊಲೀಸರೇನು ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

error: Content is protected !!