ಬೆಂಗಳೂರು, ಜುಲೈ 26: ಬೀದರ್ ಶಾಸಕ ಪ್ರಭು ಚೌಹಾನ್ ಪುತ್ರ ಪ್ರತೀಕ್‌ ಚೌಹಾನ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ನಡುವೆ, ಪ್ರಕರಣದ ಪ್ರಮುಖ ಸ್ಥಳವಾಗಿದ್ದ ಬೆಂಗಳೂರು ನಗದಿಯ ಖಾಸಗಿ ಹೋಟೆಲ್‌ನಲ್ಲಿ ಪೊಲೀಸರು ಗುರುವಾರ ಸ್ಥಳ ಮಹಜರು ನಡೆಸಿದ್ದಾರೆ.

ಆರೋಪದ ಪ್ರಕಾರ, 2023ರ ಅಕ್ಟೋಬರ್ 3ರಂದು ಪ್ರತೀಕ್‌ ಚೌಹಾನ್ ಹಾಗೂ ಸಂತ್ರಸ್ತ ಯುವತಿ ಇಬ್ಬರೂ ನಿಶ್ಚಿತಾರ್ಥಕ್ಕೂ ಮುನ್ನ ಬೆಂಗಳೂರಿಗೆ ಬಂದು, ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ಹೋಟೆಲ್ ರೂಮ್‌ ಬುಕ್ಕಿಂಗ್ ಮೇಕ್ ಮೈ ಟ್ರಿಪ್ ವೇದಿಕೆಯ ಮೂಲಕ ಸಂತ್ರಸ್ತೆ ಮಾಡಿದ್ದರೆನ್ನಲಾಗಿದೆ. ಇದೀಗ ಪೊಲೀಸರು  ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಸ್ಥಳವಾದ ಮಹಾರಾಷ್ಟ್ರದಲ್ಲೂ ತನಿಖೆ ಮುಂದುವರೆಸಿದ್ದಾರೆ.

‘ನ್ಯಾಯವಿಲ್ಲದ ತನಿಖೆ’: ಸಂತ್ರಸ್ತೆ ಆಕ್ರೋಶ

ಘಟನೆಯ ಕುರಿತು ಎಫ್‌ಐಆರ್ ದಾಖಲಾಗಿದ್ದು ಐದು ದಿನಗಳಾಗುತ್ತಿದ್ದರೂ ಆರೋಪಿತನ ಬಂಧನ ಇನ್ನೂ ಆಗಿಲ್ಲವೆಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈಗಾಗಲೇ ಮೂರ್ನಾಲ್ಕು ಕಡೆಗಳಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದರೂ ತಕ್ಷಣದ ಕಾನೂನು ಕ್ರಮ ಕೈಗೊಂಡಿಲ್ಲ. ಅಲ್ಲದೇ, ಪೊಲೀಸರು ತಮ್ಮ ಜತೆ ದುರುಪಯೋಗವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ

ಈ ಪ್ರಕರಣದಲ್ಲಿ ನ್ಯಾಯ ಸಿಗಬೇಕು ಎಂದು ಆಗ್ರಹಿಸಿರುವ ಸಂತ್ರಸ್ತ ಯುವತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿದ್ದಾರೆ. “ನಾನು ಹಾಗೂ ನನ್ನ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ ಈಗ ನಮ್ಮದೇ ವಿರುದ್ಧ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸುತ್ತಿದೆ. ದಯವಿಟ್ಟು ನನಗೆ ನ್ಯಾಯ ಒದಗಿಸಿ,” ಎಂದು ಮನವಿಯಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತೀಕ್ ಚೌಹಾನ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ತಿರುವು ಪಡೆಯುತ್ತಿದ್ದು, ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Related News

error: Content is protected !!