ಆಂಧ್ರಪ್ರದೇಶದ ಏಲೂರಿನಲ್ಲಿ ಸೋಮವಾರ ಸಂಭವಿಸಿದ ದುರ್ಘಟನೆ ಒಂದು ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ. ಉಂಗುಟೂರು ಮಂಡಲದ ನಲ್ಲಮಡುವಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ಶಾಲೆಯ ಶಿಕ್ಷಕಿ ದೇವಿಕಾ ಮಂದಾಡ (38) ಅವರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ದೇವಿಕಾ ಅವರು ನೂಜಿವೀಡು ಸಮೀಪದ ಬತ್ತುಲವಾರಿಗುಡೆಂ ಗ್ರಾಮದ ನಿವಾಸಿ ನಿವೃತ್ತ ಕಂದಾಯ ನಿರೀಕ್ಷಕ ಲಕ್ಷ್ಮಯ್ಯ ಹಾಗೂ ಪ್ರಭಾವತಿ ಅವರ ಪುತ್ರಿಯಾಗಿದ್ದು, 20 ವರ್ಷಗಳ ಹಿಂದೆ ಪೆದಪದವು ಮಂಡಲದ ನಾಯ್ಡುಗುಡೆಂ ಗ್ರಾಮದ ನಿವಾಸಿ ಚಿನ್ನಿ ಸುರೇಂದ್ರಕಿಚ್ಚಿ ಅವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಪವನ್ ತೇಜ್ ಹಾಗೂ ಗೌತಮ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಪತಿ ಸುರೇಂದ್ರ ಖಾಸಗಿ ಶಾಲೆಯಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ದಂಪತಿ ಐದು ವರ್ಷಗಳ ಹಿಂದೆ ಅಪಾರ್ಟ್ಮೆಂಟಿನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಸೋಮವಾರ ಸಂಜೆ ಸುರೇಂದ್ರ ಅವರು ಫ್ಲ್ಯಾಟ್ ವೀಕ್ಷಣೆಗೆ ಹೋಗಿದ್ದ ಸಂದರ್ಭದಲ್ಲಿ ದೇವಿಕಾ ಅವರು ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಮನೆಗೆ ಹಿಂತಿರುಗಿದ ಸುರೇಂದ್ರ ಈ ದಾರಣ ದೃಶ್ಯ ನೋಡಿ ತೀವ್ರ ಆಘಾತಕ್ಕೊಳಗಾಗಿ, ಆಕ್ರೋಶದಲ್ಲಿ ಚಾಕುವಿನಿಂದ ತನ್ನನ್ನು ತಾನೇ ಚುಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಿಕಾ ಅವರ ಆತ್ಮಹತ್ಯೆಗೆ ಕಾರಣವಾದ ಹಿನ್ನೆಲೆ ಇನ್ನೂ ಅನಾವರಣಗೊಂಡಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
