ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಕಾಡು ಪ್ರಾಣಿಯ ಬೇಟೆ ನಡೆಸಿ ಮಾಂಸ ಸಾಗಾಟ ಮಾಡಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಕುರಿತು ಬೆಳ್ತಂಗಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಸುದೀರ್ಘ ನಿಗಾವಹಿಸಿ ದಾಳಿ ನಡೆಸಿ, ಕಾಡು ಪ್ರಾಣಿ ಮಾಂಸ ಹಾಗೂ ವಿವಿಧ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ಸಂದರ್ಭದಲ್ಲಿ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೊ ಎಂಬವರು ತಮ್ಮ ಮನೆಯ ಷೆಡ್‌ನಲ್ಲಿ ಕಾಡು ಪ್ರಾಣಿಯ ಮಾಂಸವನ್ನು ಪ್ಯಾಕ್ ಮಾಡುತ್ತಿದ್ದರು. ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕಾರಿನಲ್ಲಿ ಸಾಗಿಸಲು ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿ, ಸ್ಥಳದಲ್ಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪರಿಸರದಲ್ಲಿ ನಡೆದ ಪರಿಶೀಲನೆಯ ಬಳಿಕ ಕಾಡು ಪ್ರಾಣಿ ಬೇಟೆಗೆ ಬಳಸಿದ ಸಿಂಗಲ್ ಬ್ಯಾರಲ್ ಕೋವಿ, ಮೂರು ಗೊಳಿಗಳು (ಕಾಟ್ರೇಜ್), ಒಂದು ಕತ್ತಿ ಹಾಗೂ ಸುಮಾರು 17 ಕಿಲೋಗ್ರಾಂ ತೂಕದ ಮಾಂಸ ವಶಪಡಿಸಿಕೊಳ್ಳಲಾಗಿದೆ. ಈ ಮಾಂಸವನ್ನು ಕಾಡು ಪ್ರಾಣಿಯದ್ದೇ ಎಂದು ದೃಢೀಕರಿಸಲು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.

ಮಾಂಸ ಸಾಗಿಸಲು ಬಳಸಲಾಗುತ್ತಿದ್ದ ಕಾರು ಕಳಿಯ ಗ್ರಾಮದ ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿ ಅವರದ್ದು ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಇಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್., ಡಿಆರ್‌ಎಫ್‌ಒ ಸಂದೀಪ್, ಸಿಬ್ಬಂದಿಗಳಾದ ರಾಘವೇಂದ್ರ, ಕಿರಣ್ ಪಾಟೀಲ್, ಕಮಲ, ಬೀಟ್ ಫಾರೆಸ್ಟರ್ ಪಾರಶುರಾಮ್ ಮೇಟಿ ಹಾಗೂ ಚಾಲಕ ದಿವಾಕರ್ ಸೇರಿ ಹಲವರು ಭಾಗವಹಿಸಿದ್ದರು.

ಅರಣ್ಯ ಇಲಾಖೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related News

error: Content is protected !!