ತಿರುವನಂತಪುರಂ: ಕೇರಳದಲ್ಲಿ ನಿಪಾ ವೈರಸ್ ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಪಾಲಕ್ಕಾಡ್ ಜಿಲ್ಲೆಯಲ್ಲಿ ಇನ್ನೊಬ್ಬ ವ್ಯಕ್ತಿ ಸಾವಿಗೀಡಾಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆ, ರಾಜ್ಯದ ಆರು ಜಿಲ್ಲೆಗಳಾದ ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಹಾಗೂ ತ್ರಿಶೂರ್ ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಪಾಲಕ್ಕಾಡ್‌ನ ಕುಮಾರಂಪುತ್ತೂರು ಗ್ರಾಮದ 58 ವರ್ಷದ ವ್ಯಕ್ತಿಯೊಬ್ಬರು ನಿಪಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಪ್ರಾರಂಭದಲ್ಲಿ ಮಣ್ಣಾರ್ಕಾಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ, ನಂತರ ಪೆರಿಂತಲ್ಮಣ್ಣದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ಕೊನೆಯುಸಿರೆಳೆದರು.

ಈ ಪ್ರಕರಣದಿಂದ ಆತಂಕಗೊಂಡ ಆರೋಗ್ಯ ಇಲಾಖೆ, ಮೃತರ ಸಂಪರ್ಕದಲ್ಲಿದ್ದ ಸುಮಾರು 40 ಮಂದಿಯನ್ನು ಗುರುತಿಸಿದ್ದು, ಈಗಾಗಲೇ ನಿಪಾ ಲಕ್ಷಣಗಳ ಪರೀಕ್ಷೆ ನಡೆಸಲಾಗುತ್ತಿದೆ. ಅವರಲ್ಲಿ ಹಲವರ ವರದಿ ನೆಗೆಟಿವ್ ಬಂದಿದ್ದರೂ, ಇತ್ತೀಚಿನ ಸಾವು ಮತ್ತೊಂದು ಆತಂಕದ ವಾತಾವರಣ ಸೃಷ್ಟಿಸಿದೆ.

ಮುಂಜಾಗೃತ ಕ್ರಮವಾಗಿ, ಮೃತನ ನಿವಾಸವಿರುವ ಚಂಗಲೀರಿ ಗ್ರಾಮದ ಮೂರು ಕಿಲೋಮೀಟರ್ ಪರಿಧಿಯಲ್ಲಿ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಸಂಪರ್ಕ ಪಟ್ಟಿಯಲ್ಲಿರುವ ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗಳಿಗೂ ನಿಪಾ ಲಕ್ಷಣಗಳು ಕಂಡುಬಂದರೆ ತಕ್ಷಣ ವರದಿ ಮಾಡುವಂತೆ ಸೂಚನೆ ನೀಡಲಾಗಿದೆ.

ಪ್ರಸ್ತುತ ನಿಪಾ ಸಂಪರ್ಕ ಪಟ್ಟಿಯಲ್ಲಿರುವವರ ಸಂಖ್ಯೆ ಸುಮಾರು 500ಕ್ಕೂ ಮೀರಿದ್ದು, ಮಲಪ್ಪುರಂನಲ್ಲಿ 203, ಪಾಲಕ್ಕಾಡ್‌ನಲ್ಲಿ 178, ಕೋಝಿಕ್ಕೋಡ್‌ನಲ್ಲಿ 114 ಮತ್ತು ಎರ್ನಾಕುಲಂನಲ್ಲಿ 2 ಮಂದಿ ಗುರುತಿಸಲಾಗಿದೆ. ಮಲಪ್ಪುರಂನಲ್ಲಿ 10 ಮಂದಿ ಚಿಕಿತ್ಸೆಯಲ್ಲಿದ್ದು, ಒಬ್ಬರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲಪ್ಪುರಂನಲ್ಲಿ ತೆಗೆದುಕೊಂಡ 62 ಮಾದರಿಗಳ ವರದಿ ನೆಗೆಟಿವ್ ಬಂದಿದೆ.

ಈ ನಡುವೆ, ನಿಪಾ ದೃಢಪಟ್ಟ ಪಾಲಕ್ಕಾಡ್‌ನ ತಚ್ಚನಾಟ್ಟುಕರ ನಿವಾಸಿ ಯುವತಿ ಕೂಡ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತಿಂಗಳ 1ರಂದು ಮಲಪ್ಪುರಂನ ಮಂಕಡ ನಿವಾಸಿ 18 ವರ್ಷದ ಯುವಕನಿಗೂ ನಿಪಾ ಸೋಂಕು ದೃಢವಾಗಿತ್ತು.

ಇದೇ ಹಿನ್ನೆಲೆಯಲ್ಲಿ, ನಿಪಾ ವೈರಸ್‌ಗೆ ಬಲಿಯಾದವರ ಸಂಖ್ಯೆ ಕೇರಳದಲ್ಲಿ ಈಗ 2ಕ್ಕೆ ಏರಿದ್ದು, ಸರ್ಕಾರ ಮತ್ತು ಆರೋಗ್ಯ ಇಲಾಖೆಯು ತೀವ್ರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಆಸ್ಪತ್ರೆ ಭೇಟಿ, ಸಾಮಾಜಿಕ ಸಂಪರ್ಕ, ಹಾಗೂ ಹೈಜಿನ್ ಪಾಲನೆ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Related News

error: Content is protected !!