ಬೆಳ್ತಂಗಡಿ, ಜುಲೈ 11 – ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದಲ್ಲಿ 19 ವರ್ಷದ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆ ನಾಡದ ಕುಕ್ಕೊಟ್ಟು ನಿವಾಸಿ ನಾಗೇಶ್ ಅವರ ಮಗಳು ವೀಣಾ.

ಮಧ್ಯಾಹ್ನದ ವೇಳೆಗೆ ವೀಣಾ ಅವರ ಮನೆಯ ಸಮೀಪವಿದ್ದ ಕೆರೆಯಲ್ಲಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಈಕೆ ಪತ್ತೂರಿನ ಆಸ್ಪತ್ರೆಯ ವೈದ್ಯರಿಂದ ನಿರಂತರ ಚಿಕಿತ್ಸೆಗೆ ಒಳಪಡುತ್ತಿದ್ದಳು. ಒಂದೂವರೆ ತಿಂಗಳ ಮಗುವಿನ ತಾಯಿ ಆಗಿದ್ದ ವೀಣಾ, ತನ್ನ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಗುವನ್ನು ಸುಬ್ರಹ್ಮಣ್ಯ ಬಳಿಯ ಸಂಬಂಧಿಕರ ಮನೆಯಲ್ಲಿಟ್ಟಿದ್ದಳು.

ಶುಕ್ರವಾರ ಮಧ್ಯಾಹ್ನ ವೀಣಾ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದು, ತಕ್ಷಣವೇ ತಂದೆ ನಾಗೇಶ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದ್ದರು. ಈ ವೇಳೆಗೆ ಮನೆಯವರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದಾಗಲೇ, ಮನೆಯ ಬಳಿಯ ಕೆರೆಯಲ್ಲಿ ಶವ ತೇಲುತ್ತಿರುವುದು ಕಂಡುಬಂದಿತು.

ಅಗ್ನಿಶಾಮಕ ದಳ ಮತ್ತು ಶೌರ್ಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆಯಿತು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪೃಥ್ವಿ ಸಾನಿಕಂ, ಎಫ್‌ಎಸ್‌ಎಲ್ ಅಧಿಕಾರಿಗಳಾದ ಅರ್ಪಿತಾ, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೀಣಾ ಶವವನ್ನು ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಶವಪರೀಕ್ಷೆಗೆ ಕಳಿಸಲಾಗಿದೆ. ಈಕೆಯ ಸಾವಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ಉದ್ಭವಿಸಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ.

Related News

error: Content is protected !!