ಚಿತ್ರದುರ್ಗದಲ್ಲಿ ನಡೆದ ಘಟನೆ ಒಂದು ನಿಜಕ್ಕೂ ಪ್ರೇರಣಾದಾಯಕ ಉದಾಹರಣೆಯಾಗಿದೆ. ಕಾನೂನಿನ ಪ್ರಕಾರ ಅಪರಾಧವಾಗಿದ್ದರೂ, ಕೆಲವೆಡೆ ಇನ್ನೂ ಬಾಲ್ಯವಿವಾಹವನ್ನು ನೆರವೇರಿಸಲು ಮುಂದಾಗುವವರಿದ್ದಾರೆ. ಆದರೆ, ಇಂತಹ ಅನ್ಯಾಯದ ವಿರುದ್ಧ ಧೈರ್ಯವಾಗಿ ನಿಲ್ಲುವ ಹೆಣ್ಣು ಮಕ್ಕಳು ವಿರಳ. ಇತ್ತೀಚೆಗೆ, 16 ವರ್ಷದ ಬಾಲಕಿಯೊಬ್ಬಳು ತಮ್ಮ ಮದುವೆಯ ಸಿದ್ಧತೆ ನಡೆಯುತ್ತಿರುವುದು ತಿಳಿದು, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಅದನ್ನು ತಡೆಗಟ್ಟುವಂತೆ ಮನವಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು, ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿಯೊಂದಿಗೆ ಆಕೆಯ ಮದುವೆ ಮಾಡುವ ಯೋಜನೆ ರೂಪಿಸಿದ್ದರು. ಎಲ್ಲ ಸಿದ್ಧತೆಗಳೂ ಮುಗಿಯುತ್ತಿದ್ದಂತೆಯೇ, ಆಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಬಾಲ್ಯವನ್ನು ಕಸಿದುಕೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟ ಅವರ ಮುಂದೆ ತನ್ನ ನೋವು ಹಂಚಿಕೊಂಡ ಆಕೆ, “ನನಗೆ ಕೇವಲ 16 ವರ್ಷ. ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ, ಪೊಲೀಸ್ ಸಿಬ್ಬಂದಿ ಶಾಲೆಗೆ ಬಂದು ಬಾಲ್ಯವಿವಾಹದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಬಾಲ್ಯದಲ್ಲಿ ಮದುವೆಯಾದರೆ ಎದುರಾಗುವ ಮಾನಸಿಕ, ದೈಹಿಕ ತೊಂದರೆಗಳ ಕುರಿತು ಅಂದು ಅವರು ಹೇಳಿದ ಮಾತು ನನ್ನ ಮನಸ್ಸಿನಲ್ಲಿ ಉಳಿದುಕೊಂಡಿತ್ತು. ಅದೇ ಧೈರ್ಯವನ್ನು ಇಂದು ನನಗೆ ಕೊಟ್ಟಿದೆ” ಎಂದು ಹೇಳಿಕೊಂಡಿದ್ದಾಳೆ.
ಈ ಘಟನೆಯಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮದುವೆಯನ್ನು ತಡೆಗಟ್ಟಿದ್ದಾರೆ. ಬಾಲಕಿಯ ಧೈರ್ಯಕ್ಕೆ ಚಳ್ಳಕೆರೆಯ ಡಿವೈಎಸ್ಪಿ ಡಿ. ರಾಜಣ್ಣ ಅವರು “ಶಬ್ಬಾಶ್” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ, ಜಾಗೃತಿ ಮತ್ತು ಶಿಕ್ಷಣವು ಮಕ್ಕಳಿಗೆ ತಮ್ಮ ಹಕ್ಕುಗಳನ್ನು ರಕ್ಷಿಸುವ ಶಕ್ತಿ ನೀಡುತ್ತದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.
