ಮುಂಬೈ: ವಾಣಿಜ್ಯ ನಗರಿ ಮುಂಬೈನ ಮಧ್ಯಭಾಗದಲ್ಲಿ ನಡೆದ ಭೀಕರ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 15 ವರ್ಷದ ಶಾಲಾ ಬಾಲಕಿಯ ಮೇಲೆ ಐವರು ಆರೋಪಿಗಳು ಮೂರು ತಿಂಗಳ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಘಟನೆ ಕಲಾಚೌಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಭಾನುವಾರ ಪೊಲೀಸರು 25 ವರ್ಷದ ವ್ಯಕ್ತಿಯೊಬ್ಬನನ್ನು ಮತ್ತು ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳಲ್ಲಿ ಒಬ್ಬನ ಗೆಳತಿ ಬಾಲಕಿಯ ಮನೆಗೆ ಬಂದು ತನ್ನ ಗೆಳೆಯನೊಂದಿಗೆ ಆಕೆಯ ಸಂಬಂಧದ ಬಗ್ಗೆ ವಿಚಾರಿಸಿದಾಗ ಪ್ರಕರಣ ಬಹಿರಂಗಗೊಂಡಿದೆ. ಬಳಿಕ ಬಾಲಕಿಯ ಪೋಷಕರು ಆಕೆಯ ಮೊಬೈಲ್ ಪರಿಶೀಲಿಸಿದಾಗ, ಆರೋಪಿಯೊಂದಿಗೆ ಆಕೆಯ ದೈಹಿಕ ಸಂಬಂಧಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಸಂದೇಶಗಳು ಪತ್ತೆಯಾಗಿವೆ.

ಘಟನೆಯ ಬಗ್ಗೆ ಪೋಷಕರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಐವರ ವಿರುದ್ಧ ಸಾಮೂಹಿಕ ಅತ್ಯಾಚಾರ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆ ಹಾಗೂ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿಗಳ ವಿರುದ್ಧ ಮುಂದಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!